“ಧ್ರುವತಾರೆ” ಚಿತ್ರದ ಆಡಿಯೋ ಬಿಡುಗಡೆ ಮಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್.

1985ರಲ್ಲಿ ವರ ನಟ ಡಾ. ರಾಜಕುಮಾರ್ ಅಭಿನಯದ ಧ್ರುವತಾರೆ ಚಿತ್ರ ಪ್ರೇಕ್ಷಕರ ನೆಚ್ಚಿನ ಚಿತ್ರವಾಗಿ ಧ್ರುವ ನಕ್ಷತ್ರದಂತೆ ಮಿಂಚಿತ್ತು. ಸರಿ ಸುಮಾರು 39 ವರ್ಷಗಳ ನಂತರ ಯುವ ಪಡೆಗಳ ತಂಡ ಸೇರಿಕೊಂಡು ಮತ್ತೆ ಅದೇ ಧ್ರುವತಾರೆ ಶೀರ್ಷಿಕೆಯನ್ನ ಬಳಸಿಕೊಂಡು ವಿಭಿನ್ನ ಪ್ರೇಮಮಯ ಕೌಟುಂಬಿಕ ಚಿತ್ರವಾಗಿ ಪ್ರೇಕ್ಷಕರ ಮುಂದೆ ಬರಲು ಸಿದ್ದರಾಗಿದ್ದು , ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಧ್ರುವತಾರೆ ಚಿತ್ರದ ಧ್ವನಿ ಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದ್ದು , ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎನ್.ಎಂ. ಸುರೇಶ್ ರವರ ಸಿಡಿಯ ಪೋಸ್ಟರ್ ಬಿಡುಗಡೆ ಮಾಡಿದರು. ತದನಂತರ ಮಾತನಾಡುತ್ತಾ ಚಿತ್ರರಂಗಕ್ಕೆ ಬಹಳಷ್ಟು ಹೊಸ ನಿರ್ಮಾಪಕರು , ಯುವ ಪ್ರತಿಭೆಗಳು ಬರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಉತ್ತಮ ಚಿತ್ರವನ್ನು ಮಾಡಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಂತಾಗಲಿ. ನಾನು ಕೂಡ ಆರಂಭದಲ್ಲಿ ಬಹಳಷ್ಟು ಯುವ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದೆ. ಅದೇ ರೀತಿ ಈ ಒಂದು ತಂಡದ ಪ್ರತಿಭೆಗಳು ಯಶಸ್ಸಿನ ಹಾದಿಯಲ್ಲಿ ಸಾಗಲಿ. ಹಾಡುಗಳನ್ನು ನೋಡಿದೆ ಬಹಳ ಸೊಗಸಾಗಿ ಮೂಡಿ ಬಂದಿದೆ. ಈ ಚಿತ್ರದ ನಟಿಯ ತಂದೆ ನನ್ನ ಆತ್ಮೀಯರು , ಹಾಗಾಗಿ ನಾನು ಈ ಕಾರ್ಯಕ್ರಮಕ್ಕೆ ಬಂದು ಯುವ ತಂಡಕ್ಕೆ ಬೆಂಬಲ ನೀಡುತ್ತಿದ್ದೇನೆ. ನಿರ್ಮಾಪಕರು ಹಾಕಿದ ಹಣ ವಾಪಸ್ ಬರಲಿ, ಚಿತ್ರ ಯಶಸ್ವಿಯಾಗಲಿ ಎಂದು ಶುಭ ಕೋರಿದರು.

ಇನ್ನು ಈ ಚಿತ್ರದ ನಿರ್ದೇಶಕ ಹಾಗೂ ನಟ ಪ್ರತೀಕ್ ಮಾತನಾಡುತ್ತಾ ನಾನು ಮೂಲತಃ ಮೈಸೂರುನವನು ಸುಮಾರು 15 ವರ್ಷಗಳ ಜರ್ನಿಯ ಪರಿಶ್ರಮ ಇದೆ. ಬ್ಯಾಚುಲರ್ ಇನ್ ಫೈನ್ ಆರ್ಟ್ ನಲ್ಲಿ ಕಲಿತೆ. 2008ರಲ್ಲಿ ಶಾರ್ಟ್ ಫಿಲಂಸ್ ಗಳನ್ನ ಮಾಡುತ್ತಾ ಸಾಗಿದೆ. ನನಗೆ ಅವಾರ್ಡ್ ಕೂಡ ಬಂತು, ತದನಂತರ ಸೀರಿಯಲ್ ನಲ್ಲಿ ಅಸಿಸ್ಟೆಂಟ್ ಕೆಲಸ ಮಾಡಿದೆ. ಹಾಗೆ ಒಂದು ಮಿನಿಮಮ್ ಬಜೆಟ್ ಚಿತ್ರವನ್ನ ಮಾಡಿದೆ ಅದು ಬಿಡುಗಡೆ ಆಗಲಿಲ್ಲ. ಆದರೂ ಚಿತ್ರದ ಮೇಲಿನ ವ್ಯಾಮೋಹ ಹೋಗಲಿಲ್ಲ , ನಾನು ಎಡಿಟಿಂಗ್ , ವಿ.ಎಫ್.ಎಕ್ಸ್ ಅನ್ನ ಕಲಿತುಕೊಂಡೆ. 2017ರಲ್ಲಿ ಒಂದು ಕಥೆ ಹೇಳ್ಲಾ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿತ್ತು. ನಂತರ ಮೂರು ಚಿತ್ರ ಮಾಡಿದೆ ಇನ್ನೇನು ಒಂದು ನೆಲೆಯ ಸಿಕ್ಕಿತು ಎನ್ನುವಷ್ಟರಲ್ಲಿ ಕರೋನ ಎಲ್ಲೆಡೆ ಹರಡಿತು. ಮುಂದೆ ಜೀವನ ಏನು ಎಂಬ ಪ್ರಶ್ನೆ ಕಾಡುತ್ತಿತ್ತು , ನಂತರ ಬದುಕಿಗಾಗಿ ಒಂದು ಕೆಲಸವನ್ನು ಕೂಡ ಆಯ್ಕೆ ಮಾಡಿಕೊಂಡೆ. ಇದರ ನಡುವೆ ಸೋಶಿಯಲ್ ಮೀಡಿಯಾ ನಲ್ಲಿ youtube ವಿಡಿಯೋ ಮಾಡಿದೆ ಆ ಪ್ಲಾಟ್ಫಾರ್ಮ್ ನಲ್ಲೂ ರಿಚ್ ಆದೆ.

ಅಲ್ಲಿ ನನಗೆ ಮೌಲ್ಯ ಪರಿಚಯವಾದರು ಜೊತೆಗೆ ಒಂದಷ್ಟು ವಿಡಿಯೋಗಳನ್ನು ಕೂಡ ಮಾಡಿ ಪಾಪ್ಯುಲರ್ ಆದ್ವಿ. ಮುಂದೆ ನನ್ನ ಬದುಕು ಸಿನಿಮಾ ಕಡೆ ಸಾಗಬೇಕೆಂದು ನಿರ್ಧರಿಸಿ ಈ ಧ್ರುವತಾರೆ ಚಿತ್ರವನ್ನು ಮಾಡಲು ಮುಂದಾದೆ. ಇದೊಂದು ಲವ್ ಡ್ರಾಮಾ ಚಿತ್ರ. ಲವ್ ಬ್ರೇಕ್ ಅಪ್ ಆಗಿ ಚಟದಲ್ಲಿ ಬಿದ್ದವನ ಬದುಕಲ್ಲಿ ಪ್ರೀತಿಯಿಂದ ಮೋಸ ಹೋದ ಹುಡುಗಿ ಪ್ರವೇಶ ಮಾಡಿ ಅವರಿಬ್ಬರ ಸ್ನೇಹ , ಪ್ರೀತಿ , ಮದುವೆಯಾದ ನಂತರ ನಡೆಯುವ ಕಥೆಯ ತಿರುಳು ಈ ಚಿತ್ರದಲ್ಲಿ ಬೆಸೆದುಕೊಂಡಿದೆ. ಎಣಿಸಲಾಗದಷ್ಟು ನಕ್ಷತ್ರಗಳ ನಡುವೆ ಕಂಗೊಳಿಸುತ್ತಾ ಕಾಣುವ ಧ್ರುವ ನಕ್ಷತ್ರದಂತೆ ನಾಯಕನ ಕಣ್ಣಿಗೆ ನಾಯಕಿಯು ಹಾಗೂ ಆಕೆಯ ಕಣ್ಣಿಗೆ ನಾಯಕನು ಧ್ರುವತಾರೆಯಂತೆ ಎಂಬ ವಿಚಾರದೊಂದಿಗೆ ಮನೋರಂಜನೆಯ ಜೊತೆಗೆ ಸಂದೇಶವನ್ನು ನೀಡುವ ನಿಟ್ಟಿನಲ್ಲಿ ಈ ಚಿತ್ರವನ್ನು ಮಾಡಿದ್ದೇವೆ. ಈ ಚಿತ್ರದಲ್ಲಿ ನಾನೇ ನಾಯಕ , ನನ್ನ ಪತ್ನಿಯೇ ನಾಯಕಿಯಾಗಿ ಆಯ್ಕೆಯಾಗಿ ನಟಿಸಿದ್ದಾರೆ ಈ ಚಿತ್ರಕ್ಕೆ ಕಥೆ , ಚಿತ್ರಕಥೆ , ಸಾಹಿತ್ಯ , ಎಡಿಟಿಂಗ್ ವಿ.ಎಫ್.ಎಕ್ಸ್ ಜೊತೆಗೆ ನಾನೇ ನಿರ್ದೇಶನ ಮಾಡಿದ್ದೇನೆ. ಚಿತ್ರ ಸೆನ್ಸರ್ ಮುಗಿಸಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ನಿಮ್ಮೆಲ್ಲರ ಪ್ರೀತಿ ಸಹಕಾರ ನಮ್ಮ ತಂಡದ ಮೇಲೆ ಇರಲಿ ಎಂದರು.

ಈ ಚಿತ್ರದ ನಾಯಕಿಯಾಗಿ ಅಭಿನಯಿಸಿರುವ ಮೌಲ್ಯ ಮಾತನಾಡುತ್ತಾ ನಾನು ಫಿಟ್ನೆಸ್ ಟ್ರೈನರ್ , ಈ ಸಿನಿಮಾ ನನ್ನ ಜೀವನದ ಒಂದು ಭಾಗ. ನಿರ್ದೇಶಕರ ಆಸಕ್ತಿ , ಶ್ರಮ ಕಂಡು ನಾನು ಅವರ ಜೊತೆ ಸೇರಿಕೊಂಡೆ. ಇಬ್ಬರು ಸೇರಿ ಯೂಟ್ಯೂಬ್ ವಿಡಿಯೋ , ರೀಲ್ಸ್ ಗಳನ್ನು ಮಾಡ್ತಿದ್ವಿ. ನಂತರ ದಿನಗಳಲ್ಲಿ ನಾವಿಬ್ಬರು ಮದುವೆ ಆಯಿತು. ಈ ಚಿತ್ರಕ್ಕೆ ಒಂದು ರೀತಿ ಆಡಿಶನ್ ರೀತಿ ನನ್ನ ಡೈಲಾಗ್ ಡೆಲಿವರಿ ಕೇಳಿ ಆಯ್ಕೆ ಮಾಡಿಕೊಂಡರು. ಇದರಲ್ಲಿ ನನದೊಂದು ಇನ್ನೋಸೆಂಟ್ ಹುಡ್ಗಿ ಪಾತ್ರ. ಪ್ರೀತಿಂದ ಬೇಸತ್ತ ಹುಡುಗಿಯ ಬದುಕಲ್ಲಿ ನಡೆಯುವ ಘಟನೆ ಈ ಚಿತ್ರದಲ್ಲಿ ಒಳಗೊಂಡಿದೆ. ಬಹಳ ಶ್ರಮಪಟ್ಟು ಈ ಚಿತ್ರವನ್ನು ಮಾಡಿದ್ದೇವೆ ನಿಮ್ಮೆಲ್ಲರ ಸಹಕಾರ ಪ್ರೀತಿ ಇರಲಿ ಎಂದು ಕೇಳಿಕೊಂಡರು.

ಜಿಪಿ ಫಿಲಂ ಸ್ಟುಡಿಯೋಸ್ ಜೊತೆ ಗೆಳೆಯ ಶಿವರುದ್ರ ನಿರ್ಮಾಣದಲ್ಲಿ ಸಾತ್ ನೀಡಿದ್ದು, ನಿರ್ದೇಶಕರ ಚಡ್ಡಿ ದೋಸ್ತ್ ಶಿವರುದ್ರ ಪ್ರಕಾರ ಚಿತ್ರ ಉತ್ತಮವಾಗಿ ಬಂದಿದ್ದು, ಯಶಸ್ಸು ಸಿಗಲಿದೆ ಎಂಬ ಭರವಸೆಯನ್ನು ಹೊಂದಿದ್ದಾರೆ. ಈ ಒಂದು ಚಿತ್ರದಲ್ಲಿ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಒಂದು ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರಂತೆ. ಹಾಗೆಯೇ ಬಾಲ ಪ್ರತಿಭೆ ಸಮೈ ನಾಯಕಿಯ ತಮ್ಮನ ಪಾತ್ರ , ಸಂಗೀತ ನಾರಾಯಣ್ ನಾಯಕನ ಎಕ್ಸ ಗರ್ಲ್ ಫ್ರೆಂಡ್ ಪಾತ್ರ. ಮೇಘನಾ ಒಂದು ಫನ್ನಿ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರಂತೆ. ನಾಯಕನ ಗೆಳೆಯನ ಪಾತ್ರದಲ್ಲಿ ಅಶ್ವಿನ್ ರಾವ್ ಪಲ್ಲಕ್ಕಿ , ವಿಶೇಷ ಪಾತ್ರದಲ್ಲಿ ಸುಮನ್ ನಗರ್ಕರ್ ಸೇರಿದಂತೆ ರಮೇಶ್ ಪಂಡಿತ್ , ಪಿಡಿ ಸತೀಶ್ ಹಾಗೂ ಇನ್ನೂ ಅನೇಕ ಕಲಾವಿದರು ಈ ಚಿತ್ರ ತಂಡಕ್ಕೆ ಸಾತ್ ನೀಡಿದ್ದಾರೆ. ನಿತಿನ್ ಹಾಗೂ ಭರತ್ ಚಿತ್ರತಂಡಕ್ಕೆ ಸಹಕಾರಿಯಾಗಿ ನಿಂತಿದ್ದು,
ಚಂದನ್.ಬಿ ನಾಯಕ್ ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತದ ಮೋಡಿಯಲ್ಲಿ 5 ಹಾಡುಗಳು ಹೊರಬಂದಿದ್ದು, ಹೊಸ ಗಾಯಕರು ಹಾಡಿರುವ ಈ ಆಡಿಯೋ ಹಕ್ಕನ್ನ A2 ಮ್ಯೂಸಿಕ್ ಸಂಸ್ಥೆ ಒಳ್ಳೆ ರೇಟ್ ಕೊಟ್ಟು ಪಡೆದುಕೊಂಡಿದೆ. ಈ ಒಂದು ಚಿತ್ರವನ್ನು ದೀಪಕ್ ವಿತರಣೆಯನ್ನು ಮಾಡುತ್ತಿದ್ದು , ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರಲಿದ್ದಾರಂತೆ

Leave a Comment